ನಮ್ಮ ದೇಶದಲ್ಲಿ ಬಿತ್ತನೆ ಬೀಜಗಳ ಸಂರಕ್ಷಣೆಯಾಗಬೇಕಿದೆ: ಮಂಡ್ಯ ಜಿಲ್ಲೆಯಲ್ಲಿ ಮಹಿಳೆಯರ ಆಗ್ರಹ
ಮಂಡ್ಯ – ದೇಶದಲ್ಲಿ ಬಿತ್ತನೆ ಬೀಜದ ಸಂರಕ್ಷಣೆಯಾಬೇಕಾದ ಅವಶ್ಯಕತೆಯಿದ್ದು, ಬೀಜ ಸಂಸ್ಕೃತಿಯನ್ನು ಅಳವಡಿಸಿಕೊಳ್ಳದಿದ್ದರೆ ರೈತರು ಬಹುರಾಷ್ಟ್ರೀಯ ಕಂಪನಿಗಳತ್ತ ಕೈಚಾಚುವ ಪರಿಸ್ಥಿತಿ ಎದುರಿಸುವ ಸಂದರ್ಭ ಬರುತ್ತದೆ ಎಂದು ಪ್ರಾಧ್ಯಾಪಕಿ ಡಾ. ವಿಜಯಲಕ್ಷ್ಮಿ ಮಾನಾಪುರ ಮಂಡ್ಯದಲ್ಲಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಅಖಿಲ ಕರ್ನಾಟಕ ಜಾನಪದ ಪರಿಷತ್ತು, ಜಿಲ್ಲಾಡಳಿತ, ಜಾನಪದ ಜನ್ನೆಯರು ಟ್ರಸ್ಟ್ ವತಿಯಿಂದ ನಗರದ ಕೆವಿಎಸ್ ಶತಮಾನೋತ್ಸವ ಸಭಾಭವನದಲ್ಲಿ ಮಹಿಳಾ ಜಾನಪದ ಗೋಷ್ಠಿ ನಡೆದ ವೇಳೆ, ಜನಪದ ಬದುಕಿನಲ್ಲಿ ಮಹಿಳೆ ಪೂರಕವೋ, ಪೋಷಕವೋ, ಪ್ರತ್ಯೇಕವೋ ಎನ್ನುವ ವಿಚಾರ ಮಂಡಿಸಿ ಮಾತನಾಡಿದರು.
“ದೇಶದಲ್ಲಿ ಬೀಜ ಕ್ರಾಂತಿಯಾಗದಿದ್ದಲ್ಲಿ ನೈಸರ್ಗಿಕ ಕೃಷಿ ಹಾಳಾಗುವ ಎಲ್ಲಾ ಸಾಧ್ಯತೆಗಳಿವೆ. ಹಾಗಾಗಿ ಬೀಜ ಸಂರಕ್ಷಕಿಯರನ್ನು ಪತ್ತೆಮಾಡುವ ಮೂಲಕ ಅವರು ಕಾಪಾಡಿಕೊಂಡು ಬಂದಿರುವ ಬೀಜಗಳನ್ನು ಸಂರಕ್ಷಿಸುವ ಅಗತ್ಯತೆಯಿದೆ” ಎಂದು ಪ್ರತಿಪಾದಿಸಿದರು.
“ಹಿಂದೆ ಕೃಷಿಯಲ್ಲಿ ಪ್ರಧಾನಪಾತ್ರ ವಹಿಸುತ್ತಿದ್ದ ಮಹಿಳೆ ನೈಸರ್ಗಿಕ ಕೃಷಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಳು. ಅದರೊಂದಿಗೆ ಕೃಷಿಯಲ್ಲಿ ಉತ್ಪಾದನೆಯಾಗುವ ಬೀಜಗಳನ್ನು ಸಹ ಹಿಂದಿನಿಂದಲೂ ಕಾಪಾಡಿಕೊಂಡು ಬಂದಿದ್ದಳು. ತನ್ನ ಕುಟುಂಬಕ್ಕೆ ಸಾಕಾಗುವಷ್ಟು ಇಟ್ಟುಕೊಂಡು ಇತರರಿಗೂ ಹಂಚುವ ಮೂಲಕ ಕೊಡು-ಕೊಳ್ಳುವ ಪದ್ಧತಿ ಜನಪದದಲ್ಲಿ ಜಾರಿಯಲ್ಲಿತ್ತು. ಇವೆಲ್ಲವೂ ಜೀವನಾನುಭವವನ್ನು ಕಲಿಸುವಲ್ಲಿ ನೆರವಾಗುತ್ತವೆ ಎಂದು ಹೇಳಿದರು. ಜನಪದವನ್ನು ಕಟ್ಟಿರುವ ಮಹಿಳೆ ಪ್ರತ್ಯೇಕವಲ್ಲ, ಆಕೆ ಪೂರಕ ಹಾಗೂ ಪೋಷಕಳಾಗಿದ್ದಾಳೆ. ಪುರುಷರು ಬಿಟ್ಟು ಹೋದ ಮನೆಯ ಜವಾಬ್ದಾರಿ ಹಾಗೂ ಆರ್ಥಿಕ ಸ್ಥಿತಿ ಗತಿಗಳನ್ನು ಅತ್ಯಂತ ಚೆನ್ನಾಗಿ ನಿರ್ವಹಿಸುವಂತಹ ಚಾಕಚಕ್ಯತೆಯನ್ನು ಜನಪದ ಮಹಿಳೆಯರು ಬೆಳೆಸಿಕೊಂಡಿದ್ದರು” ಎಂದು ಅವರು ಉದಾಹರಣೆಯೊಂದಿಗೆ ವಿವರಿಸಿದರು.
“ದ್ರಾವಿಡ ಭಾಷೆಯಲ್ಲಿ ಜಾನಪದ” ಎನ್ನುವ ವಿಷಯದ ಕುರಿತು ಡಾ. ರಜಿಯಾ ಬೇಗಂ ಮಾತನಾಡಿ, ಕರ್ನಾಟಕದಲ್ಲಿ ಮಾತ್ರ ಮಹಿಳೆಯರ ವಿಚಾರದಲ್ಲಿ ಹೆಚ್ಚು ಕೆಲಸಗಳಾಗಿದ್ದು, ಜನಪದದಲ್ಲಿ ಹೆಣ್ಣು ಪ್ರತಿರೋಧವನ್ನು ಒಡ್ಡಿದ್ದರೂ, ಅದನ್ನು ದಾಖಲಿಸಿಲ್ಲ ಎನ್ನುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಕೆರೆಗೆ ಹಾರ ಎನ್ನುವ ಜಾನಪದ ಕಥನದಲ್ಲಿ ಕೆರೆಗೆ ಬಲಿಯಾಗುವ ಮಹಿಳೆ ತನ್ನ ಕುಟುಂಬದವರು, ಸ್ನೇಹಿತರ ಜೊತೆ ಕಷ್ಟಗಳನ್ನು ಹಂಚಿಕೊಳ್ಳುತ್ತಾಳೆ. ಆದರೆ ಪ್ರತಿಯೊಬ್ಬರೂ ಸಹ ಕುಟುಂಬ ಹೇಳುವಂತೆಯೇ ಕೇಳಬೇಕು ಎಂದು ಸೂಚಿಸುತ್ತಾರೆಯೇ ಹೊರತು, ಆಕೆಯ ಮನಸ್ಥಿತಿ, ಬದುಕುವ ಹಕ್ಕಿನ ಬಗ್ಗೆ ಕಾಳಜಿ ತೋರುವುದಿಲ್ಲ. ಹೀಗೆ ಮಹಿಳೆಯರ ಪ್ರತಿರೋಧದ ನಡುವೆಯೂ ಪುರುಷ ಪ್ರಧಾನ ಸಮಾಜವೇ ಮೆರೆಯುವುದನ್ನು ಸಹಿಸಿಕೊಂಡು, ಸ್ವಾರ್ಥವನ್ನು ದೂರ ಮಾಡಿ ಕುಟುಂಬದ ಉಳಿವು ಹಾಗೂ ಸಮಾಜದ ಉನ್ನತಿಗಾಗಿಯೇ ತನ್ನ ಬದುಕನ್ನು ಮೀಸಲಿಟ್ಟಿದ್ದಳು ಎಂದು ವಿವರಿಸಿದರು.
ಇದನ್ನು ಓದಿ… ಭಾರತದಲ್ಲಿ ಸಕ್ಕರೆ ಉತ್ಪಾದನೆ ಹೆಚ್ಚಾಗಿದ್ದರೂ, ಕರ್ನಾಟಕದಲ್ಲಿ ಕೊಂಚ ಇಳಿಕೆಯಾಗಿದೆ.
ಇದೆ ತರಹದ ಕೃಷಿಗೆ ಸಂಬಂಧ ಪಟ್ಟಂತಹ ಮತ್ತಷ್ಟು ಮಾಹಿತಿಗಾಗಿ ನಮ್ಮ ನೇಗಿಲ ಯೋಗಿ ಅಪ್ ಡೌನ್ಲೋಡ್ ಮಾಡಿ.
ಮತ್ತು ಕೃಷಿ ಗೆ ಸಂಬಂಧಿಸಿದಂತಹ ಎಲ್ಲ ಬಗೆಯ ಮಹಿತಿಯನ್ನ ತಕ್ಷಣಕ್ಕೆ ನಿಮ್ಮ ಮೊಬೈಲ್ ನಲ್ಲಿಯೇ ಪಡೆದುಕೊಳ್ಳಿ