ರಾಯಚೂರು ಕೃಷಿ ಮಾರುಕಟ್ಟೆ: ರಾಯಚೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಮೂಲಸೌಕರ್ಯಗಳ ತೊಂದರೆ ಕುರಿತು ರೈತರ ಆಕ್ರೋಶ.
ದೊಡ್ಡ ಪ್ರಮಾಣದಲ್ಲಿ ವಹಿವಾಟು ಮತ್ತು ರೈತರಿಂದ ಖರೀದಿಸುವ ಕೃಷಿ ಉತ್ನನ್ನಗಳಿಗೆ ಉತ್ತಮ ಬೆಲೆ ನೀಡುವ ವಿಷಯಗಳಲ್ಲಿ ರಾಯಚೂರು ಕೃಷಿ ಉತ್ಪನ್ನ ಮಾರುಕಟ್ಟೆ ಹೆಸರುವಾಸಿಯಾಗಿದೆ. ಆದರೆ ಮೂಲಸೌಕರ್ಯಗಳ ವಿಷಯದಲ್ಲಿ ಮಾತ್ರ ಹಿಂದುಳಿದಿರುವ ಕಾರಣ, ವ್ಯಾಪಾರಿಗಳು ಹಾಗೂ ರೈತರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಮೂಲಭೂತ ಸೌಕರ್ಯಗಳಾದ, ಕುಡಿಯಲು ಶುದ್ಧನೀರು ಹಾಗೂ ಶೌಚಾಲಯ ವ್ಯವಸ್ಥೆಗಳೇ ಇಲ್ಲದ ಕಾರಣ, ರೈತರು ಪರದಾಡುವಂತಹ ಪರಿಸ್ಥಿತಿ ಇದೆ. ಅದರಲ್ಲೂ ಇಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಹಮಾಲರ ಸ್ಥಿತಿಯಂತೂ ಅಯೋಮಯವಾಗಿದೆ. ವಾಹನಗಳ ಮರೆಯಲ್ಲಿ ಅಥವಾ ಆವರಣ ಗೋಡೆಗಳ ಪಕ್ಕದಲ್ಲಿ ಶೌಚಾಲಯಕ್ಕೆ ಹೋಗುವುದಕ್ಕೆ ಹರಸಾಹಸ ಪಡುವಂತಾಗಿದೆ. ಎಪಿಎಂಸಿಯಲ್ಲಿ ವಹಿವಾಟು ಮತ್ತು ಸೌಕರ್ಯಗಳು ಒಂದಕ್ಕೊಂದು ವಿರುದ್ಧ ದಿಕ್ಕಿನಲ್ಲಿವೆ ಎಂದೇ ಹೇಳಬಹುದು. ಸದ್ಯ ಇಲ್ಲಿ ಭತ್ತದ ವಹಿವಾಟು ನಡೆಯುತ್ತಿದ್ದು, ಪ್ರತಿನಿತ್ಯ ನೂರಾರು ರೈತರು ಎಪಿಎಂಸಿ ಆವರಣಕ್ಕೆ ಬೆಳಗಿನ ಜಾವದಲ್ಲಿ ಬಂದು ತಲುಪುತ್ತಾರೆ. ಒಂದು ವೇಳೆ, ಆ ದಿನ ಭತ್ತ ಮಾರಾಟವಾಗದಿದ್ದರೆ ಇನ್ನೊಂದು ದಿನ ಉಳಿದುಕೊಳ್ಳಬೇಕಾಗುತ್ತದೆ. ಇಂತಹ ಅನಿವಾರ್ಯತೆ ಎದುರಿಸುವ ರೈತರಿಗೆ ಮಲಗುವುದಕ್ಕೆ ಕೂಡ ವ್ಯವಸ್ಥೆ ಕಲ್ಪಿಸಬೇಕು ಎನ್ನುವುದು ರೈತರ ಬೇಡಿಕೆ.
ಈಗಾಗಲೇ ರೈತರು ಲಘು ವಿಶ್ರಾಂತಿ ತೆಗೆದುಕೊಳ್ಳಲು ಹಾಗೂ ಅನಿವಾರ್ಯತೆ ಇದ್ದಲ್ಲಿ ರಾತ್ರಿ ಉಳಿದುಕೊಳ್ಳಲಿ ಎನ್ನುವ ಕಾರಣಕ್ಕಾಗಿಯೇ ಎಪಿಎಂಸಿ ಆವರಣಗಳಲ್ಲಿ ರೈತ ಭವನಗಳನ್ನು ನಿರ್ಮಾಣ ಮಾಡಲಾಗಿದೆ. ರಾಯಚೂರಿನಲ್ಲಿಯೂ ಸುಸಜ್ಜಿತ ರೈತ ಭವನ ನಿರ್ಮಿಸಲಾಗಿದೆ, ಆದರೆ ಸೂಕ್ತವಾಗಿ ಅದರ ನಿರ್ವಹಣೆ ಮಾಡಲು ಆಗದ ಕಾರಣ ರೈತರು ರಾತ್ರಿ ಸಮಯದಲ್ಲಿ ಉಳಿದುಕೊಳ್ಳಲು ವ್ಯವಸ್ಥೆಯಿಲ್ಲದಂತಾಗಿದೆ. ಮಲಗುವುದು ಬಿಡಿ, ಕನಿಷ್ಠಪಕ್ಷ ರೈತರು ಮಾತನಾಡುತ್ತಾ ಕುಳಿತುಕೊಳ್ಳುವುದಕ್ಕೂ ವ್ಯವಸ್ಥೆ ಮಾಡಿಲ್ಲ ಎನ್ನುವ ಆಕ್ರೋಶಗಳು ವ್ಯಕ್ತವಾಗುತ್ತಿವೆ.
ಇನ್ನು, ದೇವದುರ್ಗ ಪಟ್ಟಣದ ಎಪಿಎಂಸಿ ಆವರಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದ್ದು, ಅದೂ ಕೂಡ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಪ್ರತಿ ಶನಿವಾರ ಜಾನುವಾರು ಹಾಗೂ ಕುರಿಗಳ ಸಂತೆಯು ಎಪಿಎಂಸಿ ಆವರಣದಲ್ಲಿಯೇ ನಡೆಯುವ ಕಾರಣ, ಅವುಗಳಿಗೂ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. ಇತ್ತ ರೈತರಿಗೆ ಕುಡಿಯುವ ಶುದ್ಧ ನೀರಿನ ಘಟಕ ಇದ್ದರೂ, ಬಳಸಲಾಗದೇ ನಿರುಪಯುಕ್ತವಾಗಿದೆ.
ಹಾಗಾಗಿ, ಮಾರುಕಟ್ಟೆಗೆ ಬರುವ ರೈತರು ಕುಡಿಯುವ ನೀರಿಗಾಗಿ ಹೋಟೆಲ್‌ಗಳನ್ನು ಹುಡುಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬಹಿರ್ದೆಸೆ, ಮೂತ್ರ ವಿಸರ್ಜನೆಯಂತೂ ದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ಸೌಲಭ್ಯಗಳ ಕೊರತೆಯಿಂದಾಗಿ ರೈತ ಮಹಿಳೆಯರು ಅನುಭವಿಸುವ ನರಕಯಾತನೆ ಅಪಾರ . “ಇಪ್ಪತ್ತು ವರ್ಷಗಳ ಹಿಂದೆ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾರಂಭವಾದಾಗ ಸುಸಜ್ಜಿತ, ಅಗತ್ಯ ಸೌಲಭ್ಯಗಳ ಪ್ರಾಂಗಣಕ್ಕೆ ಮಾರುಕಟ್ಟೆ ಸ್ಥಳಾಂತರದ ಬಗ್ಗೆ ಸಂತೋಷಪಟ್ಟೆವು. ನಂತರ ಅಲ್ಲಿನ ದಾಖಲೆಗಳಲ್ಲಿ ಹೇಳಲಾದ ಸೌಲಭ್ಯಗಳನ್ನು ಕಂಡು ಬೆರಗಾಗಿದ್ದೆವು. ಆದರೆ, ಈಗ ಅಗತ್ಯ ಸೌಲಭ್ಯಗಳ ಕೊರತೆಯ ಬಗ್ಗೆ ಆಡಳಿತ ಮಂಡಳಿ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ” ಎಂದು ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಈ ಬಗ್ಗೆ ಮಾತನಾಡಿದ ರಾಯಚೂರು ಎಪಿಎಂಸಿ ಕಾರ್ಯದರ್ಶಿ ಆದಪ್ಪಗೌಡ “ರಾಯಚೂರು ಎಪಿಎಂಸಿಯಲ್ಲಿ ಕೆಲವು ಮೂಲಸೌಕರ್ಯಗಳಿಲ್ಲ, ಸದ್ಯ ಎಲ್ಲವನ್ನೂ ಒಂದೊಂದಾಗಿ ಸುಧಾರಿಸುವ ಕೆಲಸ ಮಾಡುತ್ತಿದ್ದೇವೆ. ಈಗಾಗಲೇ ಸುಮಾರು 1.3 ಕೋಟಿ ರೂ. ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಹಾಗೂ ಮಳೆಗಾಲದಲ್ಲಿ ಸೋರಿಕೆಯಾಗುವ ಪ್ಲಾಟ್‌ಗಳ ದುರಸ್ತಿ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ” ಎಂದು ಹೇಳಿದರು.
ಇದನ್ನು ಓದಿ… Agricultural Education: ಇನ್ನು ಮುಂದೆ ಶಾಲೆಗಳಲ್ಲಿ ಕೃಷಿಯೂ ಕೂಡ ಪಠ್ಯಕ್ರಮದ ಒಂದು ಭಾಗವಾಗಲಿದೆ !
ಇದೆ ತರಹದ ಕೃಷಿಗೆ ಸಂಬಂಧ ಪಟ್ಟಂತಹ ಮತ್ತಷ್ಟು ಮಾಹಿತಿಗಾಗಿ ನಮ್ಮ ನೇಗಿಲ ಯೋಗಿ ಅಪ್ ಡೌನ್ಲೋಡ್ ಮಾಡಿ.
ಮತ್ತು ಕೃಷಿ ಗೆ ಸಂಬಂಧಿಸಿದಂತಹ ಎಲ್ಲ ಬಗೆಯ ಮಹಿತಿಯನ್ನ ತಕ್ಷಣಕ್ಕೆ ನಿಮ್ಮ ಮೊಬೈಲ್ ನಲ್ಲಿಯೇ ಪಡೆದುಕೊಳ್ಳಿ