ರೈತನೇ ದೇಶದ ಬೆನ್ನೆಲುಬು ಎನ್ನುವ ಕಾಲವೊಂದಿತ್ತು. ಈಗಲೂ ಅದೇನೂ ಬದಲಾಗದಿದ್ದರೂ, ರೈತ ಚಲಾವಣೆಯಲ್ಲಿಲ್ಲದ ನಾಣ್ಯದಂತಾಗಿರುವುದು ಮಾತ್ರ ಸತ್ಯ. ಬೆವರು ಸುರಿಸಿ ಬೆಳೆ ಬೆಳೆದು ಎಲ್ಲರಿಗೂ ಅನ್ನ ನೀಡುವ ರೈತಬಾಂಧವರ ಮಕ್ಕಳನ್ನು ಮದುವೆಯಾಗಲು ಮಾತ್ರ ಯಾರೂ ಮುಂದಾಗುತ್ತಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಈ ಸಮಸ್ಯೆ ದಿನೇ ದಿನೇ ಹೆಚ್ಚಾಗಲಾರಂಭಿಸಿದ್ದು, ರೈತ ವರ್ಗವನ್ನು ಕಂಗಾಲಾಗುವಂತೆ ಮಾಡಿದೆ. ರೈತನ ಮಕ್ಕಳಿಗೆ ಹುಡುಗಿ ಕೊಡುತ್ತಿಲ್ಲ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿರುವ ಘಟನೆ ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ನಡೆದಿದ್ದು, ಈ ನಿಟ್ಟಿನಲ್ಲಿ ಸರ್ಕಾರ ಜಾಗೃತಿ ಮೂಡಿಸಬೇಕು ಎಂದು ಕುಂದಗೋಳ ತಹಶೀಲ್ದಾರ್ಗೆ ಹೊಸಳ್ಳಿ ಗ್ರಾಮಸ್ಥರು ಮನವಿ ಪತ್ರವನ್ನೂ ಸಲ್ಲಿಸಿದ್ದಾರೆ. ಈ ವಿಷಯವನ್ನು ರಾಜ್ಯ ಸರ್ಕಾರದ ಗಮನಕ್ಕೆ ತರುವುದಾಗಿ ಕುಂದಗೋಳ ತಹಶೀಲ್ದಾರರು ಸಹ ಭರವಸೆ ನೀಡಿದ್ದಾರೆ. ಆದರೆ ಇದು ಎಷ್ಟರ ಮಟ್ಟಿಗೆ ಫಲಪ್ರದವಾಗುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.
ತಹಶೀಲ್ದಾರ್ ಗ್ರಾಮ ವಾಸ್ತವ್ಯ ಮಾಡಿದ್ದ ವೇಳೆ ಗ್ರಾಮಸ್ಥರು ಈ ವಿಭಿನ್ನ ಮನವಿ ಸಲ್ಲಿಸಿದ್ದು, ಇತ್ತೀಚಿನ ದಿನಗಳಲ್ಲಿ ರೈತರ ಮಕ್ಕಳಿಗೆ ಕನ್ಯೆ ಕೊಡಲು ಜನರು ಹಿಂದೇಟು ಹಾಕುತ್ತಿದ್ದಾರೆ. ಉದ್ಯೋಗ ಇದ್ದರೆ ಮಾತ್ರ ವಧು ಕೊಡುತ್ತೀವಿ ಎಂದು ಹೇಳುತ್ತಾರೆ. ಆದ್ದರಿಂದ ಸರ್ಕಾರ ಜನಜಾಗೃತಿ ಕಾರ್ಯಕ್ರಮ ಕೈಗೊಳ್ಳಬೇಕೆಂದು ಹೊಸಳ್ಳಿ ಗ್ರಾಮಸ್ಥರು ಕುಂದಗೋಳ ತಹಶೀಲ್ದಾರ್ಗೆ ಮನವಿ ಮಾಡಿದ್ದಾರೆ. ಸರ್ಕಾರ ಅರಿವು ಕಾರ್ಯಕ್ರಮ ಕೈಗೊಳ್ಳುವಮೂಲಕ ರೈತರ ಮಕ್ಕಳಿಗೆ ಹುಡುಗಿ ಕೊಡಿಸಿ ಎಂದೂ ಆಗ್ರಹಿಸುವ ಮೂಲಕ ಕೃಷಿ ಕ್ಷೇತ್ರವನ್ನು ಉತ್ತೇಜಿಸಬೇಕೆಂದು ಮನವಿ ಮಾಡಿದ್ದಾರೆ.
ಇನ್ನು, ಹೆಚ್ ಡಿ ಕುಮಾರಸ್ವಾಮಿಯವರಿಗೂ ಸಹ ಯುವ ರೈತನೊಬ್ಬ ಈ ಕುರಿತು ಮನವಿ ಪತ್ರ ಸಲ್ಲಿಸಿದ್ದಾರೆ. ಸಾಮಾನ್ಯವಾಗಿ ರಾಜಕೀಯ ನಾಯಕರ ಬಳಿ ಅನೇಕರು ತಮ್ಮ ಕುಟುಂಬದ ಸಮಸ್ಯೆ, ಊರಿನ ಸಮಸ್ಯೆಗಳನ್ನು ಹೇಳಿ ಪರಿಹಾರ ಕೇಳುವುದು ವಾಡಿಕೆ. ಆದರೆ ಇಲ್ಲೊಬ್ಬ ಯುವಕ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಯವರ ಬಳಿ, ಮದುವೆಯಾಗಲು ಹುಡುಗಿ ಸಿಗದ ಕಾರಣ ವಧುವಿನ ಕೊರತೆ ನೀಗಿಸುವಂತೆ ಪತ್ರದ ಮೂಲಕ ವಿನಂತಿ ಮಾಡಿಕೊಂಡಿದ್ದಾನೆ. ಒಕ್ಕಲಿಗ ರೈತ ಯುವಕರಿಗೆ ಮದುವೆಯ ವಯಸ್ಸು ಮೀರುತ್ತಿದ್ದರೂ ವಧು ದೊರೆಯದ ಕಾರಣ, ಒಕ್ಕಲಿಗ ಯುವಕರಿಗೆ ವಧುವಿನ ಕೊರತೆ ನೀಗಿಸಲು ಕ್ರಮ ಕೈಗೊಳ್ಳುವಂತೆ ಕುಮಾರಸ್ವಾಮಿಯವರ ಬಳಿ ಮನವಿ ಮಾಡಿಕೊಂಡಿದ್ದಾನೆ.
ಇದನ್ನು ಓದಿ: ನಮ್ಮ ದೇಶದಲ್ಲಿ ಬಿತ್ತನೆ ಬೀಜಗಳ ಸಂರಕ್ಷಣೆಯಾಗಬೇಕಿದೆ: ಮಂಡ್ಯ ಜಿಲ್ಲೆಯಲ್ಲಿ ಮಹಿಳೆಯರ ಆಗ್ರಹ
ಇದೆ ತರಹದ ಕೃಷಿಗೆ ಸಂಬಂಧ ಪಟ್ಟಂತಹ ಮತ್ತಷ್ಟು ಮಾಹಿತಿಗಾಗಿ ನಮ್ಮ ನೇಗಿಲ ಯೋಗಿ ಅಪ್ ಡೌನ್ಲೋಡ್ ಮಾಡಿ.
ಮತ್ತು ಕೃಷಿ ಗೆ ಸಂಬಂಧಿಸಿದಂತಹ ಎಲ್ಲ ಬಗೆಯ ಮಹಿತಿಯನ್ನ ತಕ್ಷಣಕ್ಕೆ ನಿಮ್ಮ ಮೊಬೈಲ್ ನಲ್ಲಿಯೇ ಪಡೆದುಕೊಳ್ಳಿ